Wednesday, March 21, 2018

ಗುರುತು

ನಗರದ ಮನೆಗಳಿಗೆ ಶೋಕಿ ಜಾಸ್ತಿ
ಪ್ರತಿ ಹೊಸ ಸಂಸಾರ ಬರುವಾಗಲೂ
ಬಣ್ಣ ಸವರಿ ನಿಲ್ಲುವುದು ಅದರ ಪರಿ
ಏನೆಂದರೆ ಹಾಗೆ ಬಣ್ಣ ಹೊಡೆಯುವವರ ನಿಷ್ಕರುಣೆ
ಅಲ್ಲಿಲ್ಲಿ ಗಾಯಗೊಂಡ ಗೋಡೆ, ಕೆದರಿದ ಕಟ್ಟೆಯಂಚು,
ವಾರ್ಡ್‌ರೋಬಿನ ಬಾಗಿಲಿಗಂಟಿಸಿದ ಬ್ರಾಂಡ್ ಸ್ಟಿಕರು,
ಕೊನೆಗೆ, ಹೊಡೆದ ಮೊಳೆಗಳನ್ನೂ ಇಕ್ಕಳದಿಂದೆಳೆದು ತೆಗೆದು
ಚರ್ಮ ಕಿತ್ತು ಬಂದಲ್ಲೆಲ್ಲ ಪಟ್ಟಿ ಹಚ್ಚಿ ಸಪಾಟು ಮಾಡಿ
ಬಳಿದು ಬಣ್ಣ ರೋಲಾಡಿಸಿ ಎರಡೆರಡು ಸಲ ಮಾಲೀಕನಣತಿಯಂತೆ

ಇಷ್ಟಿದ್ದೂ ನೀವು ಮನೆ ಹೊಕ್ಕು ಗೋಡೆಗೆ ಕಿವಿಗೊಟ್ಟು ಆಲಿಸಿದರೆ
ಹಿಡಿಯುವುದು ಅಸಾಧ್ಯವೇ ಹಳೆಯ ಸ್ವರಗಳ ತಂತು?
ಸ್ಥಿರ ನಿಂತು ಕಣ್ಣು ವಿಶಾಲಗೊಳಿಸಿ ನಿರುಕಿಸಿದರೆ
ಕಾಣದಿರುವುದೆ ನಿಕಟಪೂರ್ವ ನಿವಾಸಿ ಚಿಣ್ಣರ ಗೀಚು?
ಕೈಚಾಚಿ ಸವರಿದರೆ ಅಪ್ಪನ ಫೋಟೋ ನೇತುಬಿಡಲು
ಎಟುಕಲಾರದೆ ಹಳೆಯ ಮೊಳೆ ಹೊಡೆದ ಗುರುತು?

ನಾಡಿಯ ಒಮ್ಮೆ ಹಿಡಿಯುವುದಷ್ಟೇ ಕಷ್ಟ.
ನಂತರ ಮಿಡಿತದ ಲೆಕ್ಕ, ರಕ್ತಸಂಚಾರ,
ಸುಪ್ತ ಮನಸಿನ ಬಯಕೆಗಳು, ಪೂರ್ವಜನ್ಮದ ರಹಸ್ಯಗಳು
ಎಲ್ಲಾ ಖುಲ್ಲಂಖುಲ್ಲಾ.

ಮರಳಿ ಬಂದ ಜಂಗಮಜೀವಿಯೇ, ನಿರಾಶನಾಗಬೇಡ.
ಹುಡುಕು ಎದೆಹೊಕ್ಕು: ಇರಲೇಬೇಕಲ್ಲಿ ಚೂರಾದರೂ
ಕರಗದೆ ಉಳಿದ ನೆನಪಿನ ಹುಡಿ. ಹಿಡಿಯದನು
ನಿನ್ನ ನಡುಗುಬೆರಳುಗಳಲಿ. ಬಳಿಯದನವಳ ಭ್ರುಕುಟಿಗೆ.
ನೋಡೀಗ ನಯನದ್ವಯಗಳರಳುವುದ ನಿನ್ನ ಕಣ್ತುಂಬ.

No comments: