Friday, April 12, 2024

ಉತ್ತಿ ಬಿತ್ತಿದ್ದು

ಹಲ್ಲು ಬಿತ್ತೆಂದು ಅಳಬೇಡ ಮಗಳೇ
ಅವು ಹಾಲುಹಲ್ಲು, ಬೀಳಲೆಂದೇ ಹುಟ್ಟಿದವು
ವರುಷವೇಳಾಯ್ತಲ್ಲ ನಿನಗೆ, ಬೀಳುವವು ಹೀಗೆ ಒಂದೊಂದೇ
ಹುಟ್ಟುವುವಲ್ಲಿ ಹೊಸ ಹಲ್ಲು
ಫಳಫಳ ಹೊಳೆವ ಬಿಳಿಬಿಳಿ ಹಲ್ಲು
ತಿಕ್ಕಬೇಕವನ್ನು ಗಸಗಸ ಪ್ರತಿದಿನ
ಇರಿಸಿಕೊಳ್ಳಬೇಕು ಆದಷ್ಟೂ ಸ್ವಚ್ಛ
ಚಾಕ್ಲೇಟು ಬಿಸ್ಕೇಟುಗಳ ಕಡಿಮೆ ಮಾಡಿ
ತರಹೇವಾರಿ ಟೂತ್‌ಪೇಸ್ಟು ಬಳಸಿ
ಆದಾಗ್ಯೂ ಬಿದ್ದರೆ ಕುಳಿ, ತುಂಬಿಸಿ ಬೇಗಡೆ

ಹೀಗೆ ಸಹಜವಾಗಿ ಬಿದ್ದು ಅದಾಗೇ ಹುಟ್ಟುವ
ವಸ್ತು-ವಿಷಯಗಳ ಬಗ್ಗೆ ಅಷ್ಟು ಚಿಂತಿಸಬೇಕಿಲ್ಲ ಬಿಡು

ಆದರೆ ಕೆಲವೊಂದನ್ನು ನಾವೇ ಬಿತ್ತಿ ಬೆಳೆಸಬೇಕು
ಒಳ್ಳೆಯ ಬೀಜವನ್ನೇ ಆಯ್ದು, ಒಳ್ಳೆಯ ಗೊಬ್ಬರ ಹಾಕಿ,
ಪಾತಿ ಮಾಡಿ ನೆಟ್ಟು, ದಿನವೂ ನೀರೆರೆದು, ಕಳೆ ತೆಗೆದು,
ದಾಳಿ ಮಾಡುವ ಹಕ್ಕಿಪಿಕ್ಕಿ ಕಾಡುಮೃಗಗಳಿಂದ ಕಾಪಾಡಿಕೊಂಡು
ಫಲ ತೆಗೆಯುವುದೊಂದು ಧ್ಯಾನ ಮಗಳೇ...
ಬೀಜ ಬಿತ್ತುವುದಕ್ಕೂ ಮೊದಲು ಮಾಡಿಸಿರಬೇಕು ಮಣ್ಣಿನ ಪರೀಕ್ಷೆ
ಎಲ್ಲ ಗಿಡಗಳೂ ಎಲ್ಲ ಹವೆಯಲ್ಲೂ ಬೆಳೆಯುವುದಿಲ್ಲ
ಕೃಷಿಗೆ ಕೈ ಹಾಕುವ ಮೊದಲೇ ತಿಳಕೊಂಡಿರಬೇಕು ರೈತಧರ್ಮ

ಹಾಗೆ ಉತ್ತಿ ಬಿತ್ತಿಯೇ ಬೆಳೆಯಬೇಕು
ಒಳ್ಳೆಯ ಗೆಳೆಯರ ಒಳ್ಳೆಯ ವ್ಯಸನಗಳ
ಒಳಿತೆನಿಸಿದ ದಾರಿಯ ಸರಿಯೆನಿಸಿದ ಆಯ್ಕೆಗಳ
ಗಟ್ಟಿ ನಿರ್ಧಾರಗಳ ತಳೆವ ಧೃತಿಯ
ಹದಗೊಳಿಸಿಕೊಳ್ಳಬೇಕು ನಿನ್ನ ಮನವ ನೀನೇ

ಎಷ್ಟೆಲ್ಲ ವಹಿಸಿದರೂ ಜಾಗ್ರತೆ,
ಬಂದುಬಿಡಬಹುದು ಒಮ್ಮೊಮ್ಮೆ ಹಲ್ಲುನೋವು
ಸಹಿಸಬೇಕು ತುಟಿ ಕಚ್ಚಿ
ತಲುಪಿದರದು ಸಹಿಸಲಾಗದ ಹಂತ
ಇರಬೇಕು ಕಿತ್ತೊಗೆಯುವಷ್ಟು ಸ್ಥೈರ್ಯ

ಎಲ್ಲವನ್ನೂ ನಾ ಹೇಳಿಯೇ ನೀ ತಿಳಿದುಕೊಳ್ಳಬೇಕಂತಲ್ಲ;
ಆದರೆ ಈಗ ಹುಟ್ಟುವ ಈ ಹೊಸ ಹಲ್ಲುಗಳು
ನಿನಗೆ ಎಂಬತ್ತೋ ತೊಂಬತ್ತೋ ವರ್ಷವಾದಾಗ
ಮತ್ತೆ ಅಲುಗಲಾರಂಭಿಸುತ್ತವೆ...
ಆಗ ಅಕಸ್ಮಾತ್ ನೀನಿದನ್ನು ಓದಿದರೆ,
ನನಗೆ ನಂಬಿಕೆಯಿದೆ:
ಆಗಷ್ಟೆ ಹಲ್ಲು ಬಿದ್ದ ನಿನ್ನ ಮರಿಮಕ್ಕಳಿಗೆ
ಇದನ್ನು ಓದಿ ಹೇಳುವೆ.

ಡಿಲೀಟೆಡ್ ಮೆಸೇಜ್


ಡಿಲೀಟಿಸಿದ ಮೆಸೇಜುಗಳಿಗಿಂತ ಕಾವ್ಯವಿಲ್ಲ
ತುಂಬಿರುತ್ತವೆ ಅದರಲ್ಲಿ ಎಷ್ಟೋ ಅವ್ಯಕ್ತ ಭಾವಗಳು
ಪರರ ಮನಕಿಳಿದು ಪರಾಮರ್ಶಿಸುವುದಿರಲಿ,
ಕ್ಷಣ ನಿಂತು ಊಹಿಸುವಷ್ಟೂ ಸಮಯವಿಲ್ಲದ ಜಂಜಾಟದ ಈ ದಿನಗಳಲ್ಲಿ
ಏನನೋ ಕಳುಹಿಸಿ ಮರುಕ್ಷಣದಲ್ಲಿ ಅಳಿಸುವ
ಧಾರ್ಷ್ಟ್ಯ ತೋರುವೆಯಲ್ಲ, ಇರುವರೇ ನಿನಗಿಂತ ದುಷ್ಟರು ಈ ಜಗದಲ್ಲಿ?

ಹೇಳದೇ ಸುಮ್ಮನುಳಿದರೆ ಅದೊಂದು ರೀತಿ
ಕ್ಷಮಿಸಿಬಿಡಬಹುದು ಮೌನವನ್ನು
ಆದರೆ ನೀ ಹೇಳಿದಾಕ್ಷಣ ನಾನು ಕೇಳಿಸಿಕೊಳ್ಳಲಿಲ್ಲ
ಎಂಬುದನ್ನೇ ಲಾಭವಾಗಿ ಬಳಸಿ
ನೀನು ಹೀಗೆ ಮಾಡುವುದು ಎಷ್ಟು ಸರಿ?
ಮಾತಿಗೂ ಇದೆಯೇ ವ್ಯಾಲಿಡಿಟಿ?

ಹಿಂದೆಲ್ಲ ಹೇಳುತ್ತಿದ್ದರು: ಮಾತು ಆಡಿದರೆ ಹೋಯ್ತೆಂದು
ಈಗ ಹಾಗೇನಿಲ್ಲ, ಆಡಿದ ಮಾತನು ವಾಪಸು ಪಡೆಯಬಹುದು
ಹೇಳಿಯೇ ಇಲ್ಲವೆಂದು ವಾದಿಸಬಹುದು
ಇಲ್ಲ ಇಲ್ಲ, ಏನೋ ಹೇಳಿದ್ದೆ, ಮತ್ತೊಮ್ಮೆ ಹೇಳು
ಎಂದು ಎಷ್ಟು ಗೋಗರೆದರೂ
ರೈಲು ಹೋದಮೇಲೆ ಟಿಕೇಟಿಲ್ಲ ಎಂದು
ಡೈಲಾಗು ಹೊಡೆಯುತ್ತೀ

ಜೀವವಿಲ್ಲದ ವಾಟ್ಸಾಪು ನಿರ್ವಿಕಾರವಾಗಿ ತೋರಿಸುತ್ತೆ:
'This message was deleted'.
ಯಾರಿಗೋ ಕಳುಹಿಸುವ ಓಲೆಯ ತಪ್ಪಾಗಿ ನನಗೆ ಕಳುಹಿಸಿದೆಯೋ
ಅವಸರದಲ್ಲಿ ಏನೋ ಹೇಳಿ ನಂತರ ಬೇಡವೆಂದಳಿಸಿದೆಯೋ
ಅಥವಾ ನೀನಾಡಿದ್ದನ್ನು ತಕ್ಷಣವೇ ಕೇಳಿಸಿಕೊಳ್ಳಲಿಲ್ಲವೆಂದು
ಕೋಪಗೊಂಡು ಮಾತನ್ನೇ ನಿರ್ನಾಮ ಮಾಡಿದೆಯೋ
ಯಾರು ಪರಿಹರಿಸುವರು ಅನಂತ ಗೊಂದಲಗಳ?

ಉತ್ತರಕ್ಕೆಂದು ಆಕಾಶ ನೋಡಿದರೆ
ದುರುಗುಟ್ಟುವ ಸೂರ್ಯ ಕಣ್ಣು ಕುಕ್ಕಿ,
ವಾಪಸು ಮೊಬೈಲು ನೋಡಿದರೆ ಬವಳಿ ಬಂದಂತಾಗಿ
ಒಂದು ಎಳನೀರಿಗೆ ಐವತ್ತು ರೂಪಾಯಿ
ಕುಡಿಯುವ ನೀರಿಗೂ ತತ್ವಾರ
ಎಲ್ಲಿದೆ ಪ್ರೀತಿ - ನಂಬಿಕೆ - ಭರವಸೆಗಳಿಗೆ ಅರ್ಥ?


ಕಿಂಚಿತ್ತು ಮೌನ

ಇಂಥದೇ ಒಂದು ಬಿರುಬಿಸಿಲಿನ ಮಧ್ಯಾಹ್ನ
ಅಚಾನಕ್ಕಾಗಿ ಶೋರೂಮೊಂದರ ಒಳಹೊಕ್ಕ ಆಗಂತುಕ
ಅಲ್ಲಿಟ್ಟಿದ್ದ ನೂರಾರು ಟೀವಿಗಳನ್ನು ನೋಡಿ ಅವಾಕ್ಕಾದ
ಹಲವು ಬ್ರಾಂಡುಗಳು ಹಲವು ಅಳತೆಗಳು
ಒಂದೊಂದಕ್ಕೂ ಒಂದೊಂದು ಬೆಲೆ
ಪ್ರತಿ ಟೀವಿಯಲ್ಲೂ ಬೇರೆಬೇರೆ ದೃಶ್ಯಗಳು

ಕೆಲವು ಟೀವಿಗಳಲ್ಲಿ ದೈನಂದಿನ ಧಾರಾವಾಹಿ, ಸಂಸಾರದಲ್ಲಿ ಕಲಹ
ಮತ್ತೊಂದರಲ್ಲಿ ಯಾವುದೋ ಸಿನೆಮಾ,‌ ಸಮಸ್ಯೆಯಲ್ಲಿ ಹೀರೋ
ತಾಜಾ ಸುದ್ದಿ ತೋರಿಸುವ ಕೆಲವು ಟೀವಿಗಳಲ್ಲಿ ಅಪಘಾತದ ಚಿತ್ರಗಳು
ಮತ್ತೆ ಕೆಲವದರಲ್ಲಿ ಕ್ರಿಕೆಟ್ಟು ಫುಟ್‌ಬಾಲ್ ದೈತ್ಯದೇಹಿಗಳ ಬಡಿದಾಟ

ಒಂದು ಟೀವಿಯನ್ನು ಕೊಂಡೊಯ್ದೇ ಬಿಡೋಣ ಎಂದುಕೊಂಡ
ಸಾ...ರ್, ಇದಕ್ಕೆ ಇಪ್ಪತ್ತು ಪರ್ಸೆಂಟ್ ಡಿಸ್ಕೌಂಟು ಸಾರ್..
ಇದರ ಜೊತೆ ಸೆಟ್‌ಟಾಪ್ ಬಾಕ್ಸ್ ಫ್ರೀ ಸರ್.. ಸ್ಮಾರ್ಟ್ ಟೀವಿ ಸಾರ್,
ಇದನ್ನು ಕೊಂಡರೆ ಒಟಿಟಿಯೆಲ್ಲ ಆರು ತಿಂಗಳು ಪುಕ್ಕಟೆ ಬರ್ತವೇ
ಅಲ್ಟ್ರಾ ಎಚ್‌ಡಿ ಸಾರ್, ಸರೌಂಡ್ ಸೌಂಡು, ಥಿಯೇಟರ್ ಎಫೆಕ್ಟು

ಒಂದು ಟೀವಿಯ ಜತೆಜತೆ ಏನೆಲ್ಲ ಬರುವವು...
ಹಾಡು ನೃತ್ಯ ಹಾಸ್ಯ ಫೈಟಿಂಗ್ ಮರ್ಡರ್ ಮಿಸ್ಟರಿ
ಸಪ್ತಸಾಗರದಾಚೆಯ ಬೆಟ್ಟದಲಿ ಸುರಿಯುತ್ತಿರುವ ಲಾವಾ
ದ ಬಗೆಗಿನ ವಿವರಣೆ ವಿಶ್ಲೇಷಣೆ ಕೌತುಕ
ಇಪ್ಪತ್ನಾಲ್ಕು ಗಂಟೆಯೂ ಬ್ರೇಕಿಂಗ್ ನ್ಯೂಸ್
ಸುಂದರಿಯ ಹಾರುಮುಂಗುರುಳೂ, ಸಣ್ಣ ಮಗುವಿನ ಕಣ್ಣೀರೂ,
ನೀರಿನಿಂದ ಛಂಗನೆ ಜಿಗಿದ ಶಾರ್ಕಿನ ಶಾರ್ಪುಹಲ್ಲೂ
ಹೈ ಡೆಫಿನಿಷನ್ನಿನಲ್ಲಿ ಎಷ್ಟು ಸ್ಪಷ್ಟವಾಗಿ ಕಾಣುವವು...

ಒಂದು ಟೀವಿಯ ಜತೆಗೆ ಎಷ್ಟೊಂದು ಸುದ್ದಿ ವಿವರ ಮನರಂಜನೆಗಳ
ಮೂಟೆ ಕಟ್ಟಿ ಒಯ್ದು ಮನೆಯ ಜಗಲಿಯ ತುಂಬಿಸಿಬಿಡಬಹುದು
ಕದಡಿಬಿಡಬಹುದು ನೀರವವ ರಿಮೋಟಿನೊಂದು ಗುಂಡಿಯಿಂದ

ಯಾವುದನ್ನು ಕೊಳ್ಳಲಿ ಯಾವುದನ್ನು ಕೊಳ್ಳಲಿ
ಇಡೀ ಶೋರೂಮನ್ನು ಮತ್ತೊಂದು ಸುತ್ತು ಹಾಕಿದ ಆಗಂತುಕ
ಹಿಂದಿಂದೇ ಬರುತ್ತಿದ್ದ ಸೇಲ್ಸ್‌‌ಮನ್
ಇತ್ತಲೇ ಇತ್ತು ಬಿಲ್ಲಿಂಗ್ ಕೌಂಟರಿನಲ್ಲಿದ್ದ ಯಜಮಾನನ ಕಣ್ಣು

ಚಲಿಸುವ ಚಿತ್ರಗಳ ತೋರುವ ಸಾಲುಸಾಲು ಪರದೆಗಳ ನಡುವೆ
ಒಂದು ಆಫ್ ಆಗಿದ್ದ ಟೀವಿ..
ಎಲ್ಲ ಟೀವಿಗಳೂ ಮ್ಯೂಟಿನಲ್ಲಿದ್ದರೂ
ಈ ಆಫಾದ ಟೀವಿಮೊಗದಲಿ ಮಾತ್ರ ಶಾಂತಮೌನವಿದ್ದಂತಿತ್ತು

ಕ್ಷಣ ಯೋಚಿಸಿ ಹೇಳಿದ ಆಗಂತುಕ:
ಸಾರ್, ಇದನ್ನೇ ಕೊಡಿ‌.

ಸ್ಕೂಲ್ ಟ್ರಿಪ್

ಶಾಲಾಪ್ರವಾಸ ಹೊರಟ ಮಗಳು
ಬಸ್ಸಿನ ಕಿಟಕಿಯಿಂದ ಕೈ ಬೀಸಿದಳು
ಅಪ್ಪ-ಅಮ್ಮರ ಜತೆಯಿಲ್ಲದೆ ಮೊದಲ ಪಯಣ:
ಸರ್ವಸ್ವತಂತ್ರ, ಯಾರೂ ಹಿಡಿವವರಿಲ್ಲವೆನಿಸಿದರೂ
ಸಣ್ಣ ಭಯ ಇದ್ದದ್ದೇ ಎದೆಯೊಳಗೆ;
ಅಪ್ಪ-ಅಮ್ಮರಿಗಿರುವಷ್ಟಲ್ಲ, ಅಷ್ಟೇ!
ಸುತ್ತಲೆಲ್ಲ ಗೆಳೆಯರು,‌ ಕಾಯಲೊಬ್ಬ ಮ್ಯಾಮು
ಹಾಡು ಮಾತು ಆಟ ಅಂತ್ಯಾಕ್ಷರೀ ಕುರ್ಕುರೇ

ಮೊದಲು ನೋಡಿದ್ದೇ ಜಾಗ,‌ ಈಗ ಗೆಳೆಯರೊಡನಿರುವಾಗ
ಹೇಗೆ ಎಲ್ಲ ಬೇರೆಯೆನ್ನಿಸುತ್ತಿದೆ..
ಮನೆಯಲ್ಲಿ ಸೇರದ ಇಡ್ಲಿ, ಉಪ್ಪಿಟ್ಟು,
ಬಿಸಿಬೇಳೆಬಾತುಗಳು ಇಲ್ಲಿ ಹೇಗೆ ಇಷ್ಟವಾಗುತ್ತಿದೆ..
ಶಾಲೆಯಲ್ಲಿ ಕಟ್ಟುನಿಟ್ಟೆನಿಸುವ ಟೀಚರು
ಇಲ್ಲಿ ಹೇಗೆ ಎಲ್ಲರೊಂದಿಗೆ ನಗುನಗುತ್ತಿದ್ದಾರೆ..
ಅರೆ, ಅವರೂ ಹಾಡುತ್ತಿದ್ದಾರೆ, ಆಡುತ್ತಿದ್ದಾರೆ,
ನಮ್ಮೊಡನೆಯೇ ತಿನ್ನುತ್ತಿದ್ದಾರೆ, ಖಾರಕ್ಕೆ ಬಾಯಿ ಸೆಳೆಯುತ್ತಿದ್ದಾರೆ..

ಇತ್ತ ಮಗಳಿಲ್ಲದೇ ಮನೆಯೆಲ್ಲ ಬಿಕೋ ಬಿಕೋ..
ಹುಷಾರಾಗಿ ತಲುಪಿದಳೇ ಮಗಳು
ವಾಂತಿಯಾಯಿತೇ ಬಸ್ಸಿನಲ್ಲಿ
ಹುಡುಹುಡುಗರು ತಳ್ಳಾಡಿಕೊಂಡು ಬಿದ್ದರೋ
ತಿಂದಳೋ ಕೊಟ್ಟ ಊಟ ದಾಕ್ಷಿಣ್ಯ ಬಿಟ್ಟು

ಅಪ್ಪ-ಅಮ್ಮರಿಗೂ ತಮ್ಮ ಶಾಲೆಯ ಪ್ರವಾಸದ ನೆನಪು:
ಪಕ್ಕದೂರ ದೇವಸ್ಥಾನಕ್ಕೆ ಕರೆದೊಯ್ದಿದ್ದ
ಪ್ರೈಮರಿ ಶಾಲೆಯ ಒಳ್ಳೆಯ ಟೀಚರು
ಪಕ್ಕದ ತಾಲೂಕಿನ ಹೊಳೆದಂಡೆಗೆ ಕರೆದೊಯ್ದಿದ್ದ
ಮೆಡ್ಲಿಸ್ಕೂಲಿನ ಗುರುವೃಂದ
ಚಿತ್ರದುರ್ಗದ ಕಲ್ಲಿನಕೋಟೆಯ ತೋರಿಸುತ್ತ
'ಕನ್ನಡನಾಡಿನ ವೀರರಮಣಿಯ' ಹಾಡೇಬಿಟ್ಟಿದ್ದ
ಸಮಾಜಶಾಸ್ತ್ರದ ಮೇಷ್ಟ್ರು
ಅದು ಹೇಗೋ ಕೊನೆಯ ದಿನದ ಹೊತ್ತಿಗೆ
ಟೂರಿನ ದುಡ್ಡು ಹೊಂಚಿ ಕೊಡುತ್ತಿದ್ದ ಅಪ್ಪ
ಹಣ ಕೊಡಲಾಗದೆ ಸಪ್ಪಗಾಗಿದ್ದ ವಿದ್ಯಾರ್ಥಿಯ
ವೆಚ್ಚ ತಾವೇ ಭರಿಸಿದ್ದ ಹೈಸ್ಕೂಲಿನ ಹೆಡ್‌ಮೇಷ್ಟ್ರು..

ಕಾಲೇಜ್ ಪಿಕ್‌ನಿಕ್ಕಿನ ಬಸ್ಸಿನಲ್ಲಿ ಆ ಅತಿನಾಚಿಕೆಯ ಹುಡುಗಿ
ಪಕ್ಕದಲ್ಲೇ ಕುಳಿತುಕೊಳ್ಳುವಂತಾಗಿ ಮೈ ಬೆವರಿದ್ದು...
ಬೇರೆ ಹುಡುಗರೆಲ್ಲ ಸುಳ್ಸುಳ್ಳೇ ಹಾಡು ಕಟ್ಟಿ ಕಿಚಾಯಿಸುವಾಗ
ಟಚ್ಚುಟಚ್ಚಿಗೂ ಮೈ ಪುಳಕಗೊಂಡದ್ದು...

ಸಂಜೆಯಾಗುತ್ತಲೇ ಬಂದಿದೆ
ಮಗಳನು ಕರೆದೊಯ್ದಿದ್ದ ಬಸ್ಸು ಸುರಕ್ಷಿತ ವಾಪಸು
ಹಾರಿ ಇಳಿದ ವಿಜಯೀ ಮಗಳು ಬೀಗುತ್ತಿದ್ದಾಳೆ ಹಿಗ್ಗಿನಿಂದ
ಮನೆಯ ಹಾದಿಯಲಿ ಕಥೆಯೋ ಕಥೆ ಏನೇನಾಯ್ತು ಹೆಂಗೆಂಗಾಯ್ತು
ಏನೇನು ತಿಂದೆ ಏನೇನು ನೋಡಿದೆ ಏನೇನು ಮಾಡಿದೆ
ಅಜ್ಜ-ಅಜ್ಜಿಯರಿಗೆ ಫೋನಿಸಿ ವಿವರಿಸುತ್ತಿದ್ದಾಳೆ
ತಾನು ಮಾಡಿದ ಸಾಹಸಕಾರ್ಯ...

ಪೂರ್ವದಿಂದ ಪಶ್ಚಿಮಕ್ಕೆ ದಿನವೂ ಟೂರು ಹೋಗುವ ರವಿ
ಅಕೋ ಅಲ್ಲಿ ಕಿಟಕಿಯ ಗಾಜಿನಲ್ಲಿ ಹೊಳೆಯುತ್ತಿದ್ದಾನೆ ಫಳಫಳ
ಕಾದು ಕಾದು ಮೈಯೆಲ್ಲ ಕೆಂಪಾಗಿದ್ದರೂ,
ನನ್ನ ಮಗಳನೂ ಕಾದಿದ್ದಾನೆ ಇಡೀದಿನ. 

 

Monday, January 08, 2024

ಜಸ್ಟ್ ಬ್ಯಾಂಗ್ಲೂರ್

ಯಾರ್ರೀ ಎಂಟ್ನೇ ಮೈಲೀಅಂತ ಕಂಡಕ್ಟರ್ ಕೂಗಿದಾಗ ಹೌಹಾರಿ ಎದ್ದದ್ದು. ಊರಿನಲ್ಲಿ ಬಲ್ಲವರು ಹೇಳಿಕಳುಹಿಸಿದ್ದರು: ಎಂಟನೇ ಮೈಲಿ ಬಂತು ಎಂದರೆ ಬೆಂಗಳೂರು ಬಂತು ಎಂದರ್ಥ. ಅಲ್ಲಿಗೆ ಎಚ್ಚರ ಮಾಡಿಕೊಂಡು ಬ್ಯಾಗ್ ಸರಿ ಮಾಡಿಕೊಂಡು ಕುಳಿತುಕೋ. ಎಂಟನೇ ಮೈಲಿ ಆದಮೇಲೆ ಜಾಲಹಳ್ಳಿ ಕ್ರಾಸ್, ಗೊರಗುಂಟೆಪಾಳ್ಯ, ಯಶವಂತಪುರ, ನವರಂಗ್..... ಸ್ವಲ್ಪವೇ ಹೊತ್ತಿನಲ್ಲಿ ಮೆಜೆಸ್ಟಿಕ್ ಎಂಬ ಲಾಸ್ಟ್‌ ಸ್ಟಾಪ್ ಬಂದೇಬಿಡುವುದು. ಎಚ್ಚರವಾಗಿರು.. ಎಚ್ಚರವಾಗಿರುಎಂಬ ಮಾತನ್ನು ಪದೇಪದೇ ಹೇಳಿದ್ದರು ಮನೆಯಲ್ಲಿ. ಅವರು ಅಷ್ಟು ಸಲ ಹೇಳಿದಮೇಲೆಯೂ ಮೈ ಮರೆಯಲಾದೀತೇ? ಎಂಟನೇ ಮೈಲಿಯೇನು, ತುಮಕೂರು ಬಂದಾಗಲೇ ಬೆಂಗಳೂರು ಬಂತೆಂದು ಚಡಪಡಿಸಿ ಎದ್ದದ್ದು. ಇಷ್ಟಕ್ಕೂ, ಅಷ್ಟೊಂದು ಕನಸುಗಳು, ಅಷ್ಟೊಂದು ಬಯಕೆಗಳು, ಅಷ್ಟೊಂದು ನಿರೀಕ್ಷೆಗಳು, ಅಷ್ಟೊಂದು ಭಯ ಹೊದ್ದುಕೊಂಡು ಮಲಗಿದವರಿಗೆ ನಿದ್ರೆ ಬಂದೀತಾದರೂ ಹೇಗೆ?
 
ಮೆಜೆಸ್ಟಿಕ್ ಎಂಬ ಸಮುದ್ರದಲ್ಲಿ ಬಸ್ಸು ನಮ್ಮನ್ನು ಇಳಿಸಿಯೇಬಿಟ್ಟಿತು. ಎಷ್ಟೊಂದು ಕನಸುಗಳು ನನ್ನೊಂದಿಗೇ ಇಳಿದವು... ಸುತ್ತ ನೋಡಿದರೆ ನನ್ನ ಹಾಗೆಯೇ ಭಯ-ಚಡಪಡಿಕೆ-ಹಂಬಲಗಳನ್ನು ರಾಚಿಕೊಂಡಿದ್ದ ಎಷ್ಟೊಂದು ಜೀವಗಳು ಹರಿದಾಡುತ್ತಿವೆ. ಯಾವ ತೇರು ನೋಡಲು ಬಂದವರು ಇಷ್ಟೆಲ್ಲ ಜನ. ಏನೂ ತಿಳಿಯದಿದ್ದರೂ ಎಲ್ಲ ತಿಳಿದವರಂತೆ ಅದು ಹೇಗೆ ನಡೆಯುತ್ತಿದ್ದಾರೆ ಹುಸಿಗಾಂಭೀರ್ಯದಿಂದ. ಹೆಗಲ ಚೀಲದಲ್ಲಿರುವ ಎರಡು ಅಂಗಿ, ಎರಡು ಪ್ಯಾಂಟು, ಒಂದು ಕೌದಿಗಳನ್ನು ಇವರೆಲ್ಲ ಯಾವ ನಲ್ಲಿಯಿಂದಿಳಿಯುವ ಕಾವೇರಿ ನೀರಿನಲ್ಲಿ ತೊಳೆಯುವರು.  ಒಂದೇ ಪುಟದ ಬಯೋಡೇಟಾ, ಝೆರಾಕ್ಸು ಮಾಡಿಸಿದ ಅಂಕಪಟ್ಟಿ ಮತ್ತು ಯಾರನ್ನೋ ಭೇಟಿ ಮಾಡಿದರೆ ಕೆಲಸ ಕೊಡಿಸುತ್ತಾರಂತೆ ಎಂಬ ಯಾರದೋ ಮಾತಿಗೆ ಈ ಮಹಾಸಾಗರಕ್ಕಿಳಿಯುವಷ್ಟು ಭರವಸೆಯಿತ್ತಲ್ಲ.
 
ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಿ, ಕೆಲಸ, ಸಂಬಳ, ಉಳಿದುಕೊಳ್ಳಲು ಮನೆ ಎಲ್ಲವೂ ಪಕ್ಕಾ ಆದಮೇಲೆಯೇ ಬೆಂಗಳೂರಿಗೆ ಬರುವ ಇಪ್ಪತ್ತು ಪ್ರತಿಶತ ಅದೃಷ್ಟಶಾಲಿಗಳನ್ನು ಬಿಡಿ. ಆದರೆ ಇನ್ನುಳಿದ ಎಂಬತ್ತು ಜನ ಇಲ್ಲಿಗೆ ದಿಕ್ಕೆಟ್ಟು ಬಂದವರು. ದಿಕ್ಕು ಹುಡುಕಲು ಬಂದವರು. ಏನು ಗೊತ್ತಿತ್ತು ನಮಗೆ ಇಲ್ಲಿಗೆ ಬರುವಾಗ? ಅಪ್ಪ-ಅಮ್ಮ ಜೇಬಿಗೆ ತುರುಕಿ ಕಳುಹಿಸಿದ್ದ ನೋಟುಗಳು ಎಷ್ಟು ಕಾಲ ಬಾಳಿಕೆ ಬರುವಂತಿದ್ದವು? ಟೀವಿಯಲ್ಲಿ ನೋಡಿದ್ದ ನಗರದ ಚಿತ್ರ, ಹರುಕುಮುರುಕು ಇಂಗ್ಲೀಷು, ಅರೆಬರೆ ಓದುಗಳ ಜೊತೆ ಒಂದಿಷ್ಟು ಭಂಡತನ ಇಲ್ಲದಿದ್ದರೆ ಈ ನಗರದಲ್ಲಿ ನಾವು ಉಳಿದುಕೊಳ್ಳಲು ಸಾಧ್ಯವಿತ್ತೆ?
 
ಸಿಗ್ನಲ್ಲಿನ್ನಲ್ಲಿ ರಸ್ತೆ ದಾಟುವದನ್ನು ಕಲಿತೆವು, ಫಳಫಳ ಹೊಳೆವ ಹೊದಿಕೆಯ ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ ಸಾಗಿದೆವು, ಮಾಲುಗಳ ಎಸ್ಕಲೇಟರುಗಳನ್ನು ಢವಗುಡುವ ಎದೆಯೊಂದಿಗೆ ಏರಿದೆವು, ಮೂಲೆಯಂಗಡಿಯಲ್ಲಿ ಬನ್ನು ತಿಂದು - ಚಹಾ ಕುಡಿದು ಹೊಟ್ಟೆ ತುಂಬಿಸಿಕೊಂಡೆವು, ಬಿಎಂಟಿಸಿ ಬಸ್ಸೇರಿ ಪ್ರತಿ ಸ್ಟಾಪು ಬಂದಾಗಲೂ ಬಸ್‌ಸ್ಟಾಂಡ್ ಮೇಲಿನ ಹೆಸರನ್ನು ಬಗ್ಗಿಬಗ್ಗಿ ಓದಿ ನಮ್ಮ ಸ್ಟಾಪ್ ಇನ್ನೂ ಬಂದಿಲ್ಲ ಎಂದುಕೊಂಡೆವು, ದಿನಪತ್ರಿಕೆಗಳಲ್ಲಿನ ಜಾಬ್ ಓಪನಿಂಗ್ ಜಾಹೀರಾತುಗಳನ್ನು ಮಾರ್ಕ್ ಮಾಡಿಕೊಂಡು ಫೋನಿಸಿದೆವು, ಚಿತ್ರವಿಚಿತ್ರ ಹೆಸರಿನ ಕಂಪನಿಗಳಿಗೆ ಇಂಟರ್ವ್ಯೂ ಕೊಟ್ಟು ಅವರಿಂದ ವಾಪಸು ಕಾಲ್ ಬರಬಹುದೆಂದು ಕಾದೆವು, ರಾತ್ರಿಯಾಕಾಶದಲ್ಲಿ ನಕ್ಷತ್ರಗಳೊಂದನ್ನೂ ತೋರದ ನಗರ ಬೀದಿಬೀದಿಯಲ್ಲಿ ಝಗಮಗಿಸುವ ರೀತಿಗೆ ಬೆರಗಾದೆವು, ನಾಳೆ ಬೆಳಿಗ್ಗೆಯ ತಿಂಡಿಗೆ ಹಣವಿದೆಯಾ ಅಂತ ಜೇಬು ಮುಟ್ಟಿ ಮುಟ್ಟಿ ನೋಡಿಕೊಂಡೆವು.
 
ಬೆಂಗಳೂರು ನಮ್ಮನ್ನು ಬಿಟ್ಟುಕೊಡಲಿಲ್ಲ. , ಯಾರ್ಯಾರಿಗೋ ಕೆಲಸ ಕೊಟ್ಟಿದೀನಂತೆ, ನಿಂಗೆ ಇಷ್ಟು ಟ್ಯಾಲೆಂಟ್ ಇದೆ, ಬಾ ನಂಜೊತೆಅಂತ ಕರೆದುಕೊಂಡು ಹೋಗಿ ಉದ್ಯೋಗ ಕೊಡಿಸಿತು. ಮೊದಲ ಸಂಬಳ ಬಂದಾಗ ಅಮ್ಮನಿಗೆ ಸೀರೆ ಕೊಂಡೂ ಉಳಿಯಿತಲ್ಲ ಹಣ. ಪೀಜಿ, ಅಲ್ಲಿಂದ ಸಣ್ಣ ರೂಮು, ನಂತರ ಒನ್  ಬಿಎಚ್‌ಕೆ, ಸ್ವಂತ ಅಡುಗೆ, ರೂಂಮೇಟ್ಸು, ರೆಡಿಮಿಕ್ಸ್ ಸಾರು, ವೀಕೆಂಡ್ ದರಬಾರು, ಹುಡುಗಿಯ ಎಸ್ಸೆಮ್ಮೆಸ್ಸು, ಪಿಕ್‌ಪಾಕೆಟ್ ಆದ ನೋವು ಎಷ್ಟೆಲ್ಲ ಅನುಭವಗಳನ್ನು ಕೊಟ್ಟಿತು ನಗರ. ಫಸ್ಟ್ ಡೇ ಫಸ್ಟ್ ಶೋ ನೋಡಿದ ನೆಚ್ಚಿನ ಹೀರೋ ಸಿನೆಮಾ, ಅಂತರಜಾಲ ಜಾಲಾಡಿ ಪತ್ತೆಹಚ್ಚಿದ ಬೆಟ್ಟಕ್ಕೆ ಹೋದ ವೀಕೆಂಡ್ ಟ್ರೆಕ್ಕು, ಇಎಂಐನಲ್ಲಿ ಕೊಂಡ ಮೊದಲ ಟೂವ್ಹೀಲರು, ಕಾಫಿಡೇಯ ದುಬಾರಿ ಬಿಲ್ಲು, ‘ಬಯ್ ಟೂ ಗೆಟ್ ವನ್ ಫ್ರೀ ಆಫರಿನಲಿ ಕೊಂಡ ಜೀನ್ಸು, ಮೆಟ್ರೋ ಪಾಸು, ಹೇಗೋ ಉಳಿಸಿದ ನಾಲ್ಕು ಕಾಸು...  ಬೆಂಗಳೂರು ನಿಧನಿಧಾನಕ್ಕೆ ನಮ್ಮನ್ನು ಗಟ್ಟಿ ಮಾಡಿತು. ಶಕ್ತರನ್ನಾಗಿಸಿತು. ಎಂದೋ ದಿಕ್ಕೆಟ್ಟು ಕುಳಿತ ಘಳಿಗೆ ಯಾರೋ ಬಂದು ಮುಂದೇನಯ್ಯಾ ನಿನ್ನ ಕಥೆ?’ ಅಂತ ಕೇಳಿದರೆ, ‘, ಬೆಂಗಳೂರಲ್ಲೇ ಬದುಕಿದೀನಿ, ನಂಗ್ಯಾಕೆ ಭಯ? ಎಲ್ಲಾದರೂ ಹೋಗಿ ಹೆಂಗಾದರೂ ಬದುಕ್ತೀನಿ ಬಿಡಯ್ಯಾಅಂತ ಹೇಳುವಷ್ಟು ಧೈರ್ಯವನ್ನು ಕೊಟ್ಟಿತು.
 
ಮೆಜೆಸ್ಟಿಕ್ಕಿನ ರಶ್ಶಿನಲ್ಲಿ, ಸಿಲ್ಕ್‌ಬೋರ್ಡಿನ ಟ್ರಾಫಿಕ್ಕಿನಲ್ಲಿ, ಮಲ್ಲೇಶ್ವರದ ಎಂಟನೇ ಕ್ರಾಸಿನ ಅಂದದ ಹುಡುಗಿಯರಲ್ಲಿ, ಎಂಜಿ ರಸ್ತೆಯ ತಳುಕುಬಳುಕಿನಲ್ಲಿ, ಎಲೆಕ್ಟ್ರಾನಿಕ್ ಸಿಟಿಯ ಫಾರೀನ್ ಗತ್ತಿನಲ್ಲಿ, ಮಾರತ್ತಹಳ್ಳಿಯ ತಮಿಳುಗನ್ನಡದಲ್ಲಿ, ಗಾಂಧಿಬಜಾರಿನ ಮುಗ್ಧ ಸೌಂದರ್ಯದಲ್ಲಿ, ಲಾಲ್‌ಭಾಗಿನ ಫಲಪುಷ್ಪ ಪ್ರದರ್ಶನದಲ್ಲಿ, ಕೆಆರ್ ಮಾರ್ಕೆಟ್ಟಿನ ಮುಂಜಾನೆಯ ತಾಜಾ ಹೂವು-ಹಣ್ಣು-ತರಕಾರಿಗಳಲ್ಲಿ ಬೆಂಗಳೂರು ತನ್ನನ್ನು ತಾನು ತೆರೆದಿಟ್ಟುಕೊಂಡಿತು.  ಒನ್ನೆಂಡಾಫ್ ಆಗುತ್ತೆ ಸಾರ್ಆಟೋಗಳೂ, ಇಡ್ಲಿ-ಸಾಂಬಾರ್ ಡಿಪ್ಪಿನ ದರ್ಶಿನಿಗಳೂ, ಭಾನುವಾರದ ಪುಸ್ತಕ ಬಿಡುಗಡೆಗಳೂ, ಅಣ್ಣಮ್ಮನುತ್ಸವದ ತಮಟೆ ಸದ್ದೂ ನಮ್ಮ ಬದುಕಿನ ಭಾಗವಾಯಿತು.  ಬೆಂಗಳೂರು ನಿಧನಿಧಾನಕ್ಕೆ ನಮ್ಮದುಆಯ್ತು. ಎಷ್ಟರ ಮಟ್ಟಿಗೆ ಎಂದರೆ, ಯಾರೋ ಉತ್ತರ ಭಾರತದ ಟೆಕ್ಕಿ, ‘ಐ ಹೇಟ್ ದಿಸ್ ಸಿಟಿ ಯಾರ್.. ಇಲ್ಲಿನ ಟ್ರಾಫಿಕ್ಕು, ಗಲಾಟೆ, ಕೆಟ್ಟ ರಸ್ತೆಗಳು...ಅಂತೇನಾದರೂ ಭಾಷಣ ಕೊಡಲು ಶುರು ಮಾಡಿದರೆ ಅವನನ್ನು ಮಧ್ಯದಲ್ಲೇ ತಡೆದು, ‘ಇದು ನಮ್ಮೂರು, ಯಾರು ನಿನಗೆ ಇಲ್ಲಿಗೆ ಬರಲು ಹೇಳಿದ್ದು?’ ಅಂತ ದಬಾಯಿಸುವಷ್ಟು ನಾವು ಬೆಂಗಳೂರಿಗರು ಆದೆವು.
 
ಬೆಂಗಳೂರು ನಮ್ಮನ್ನು ಕೆಂಪು ಸಿಗ್ನಲ್ಲಿನಲ್ಲಿ ತಡೆದು ನಿಲ್ಲಿಸಿತು, ಹಸಿರಾಗಿ ಮುಂದೆ ತಳ್ಳಿತು, ಕಾಣದ ವೈರಸ್ಸು ಬಂದಾಗ ಊರಿಗೆ ಓಡಿಸಿತು, ಮತ್ತೆ ವಾಪಸು ಕರೆಸಿತು, ವಿದ್ಯಾರ್ಥಿ ಭವನದಲ್ಲಿ ಕೂರಿಸಿ ಮಸಾಲೆ ದೋಸೆ ತಿನ್ನಿಸಿತು, ಬೈಟೂ ಕಾಫಿ ಕುಡಿಸಿತು. ನಮಗೆ ಕೆಲಸ ಕೊಟ್ಟಿತು, ಸಂಬಳ ಕೊಟ್ಟಿತು, ಹೊಸಹೊಸ ಅನುಭವಗಳನ್ನು ಕೊಟ್ಟಿತು, ಸಂಸಾರ ಹೂಡಿಕೊಟ್ಟಿತು, ಬದುಕು ಕಟ್ಟಿಕೊಳ್ಳುವ ಕಲೆಯನ್ನು ಹೇಳಿಕೊಟ್ಟಿತು.
 
ಕೋಟ್ಯಂತರ ಜನಗಳಿಗೆ ಏನೆಲ್ಲ ಕೊಟ್ಟ ಬೆಂಗಳೂರು, ತಾನೇನೂ ಮಾಡಿಲ್ಲವೆಂಬಂತೆ ಸುಮ್ಮನೆ ಇದೆ. ತನ್ನ ಫ್ಲೈಓವರಿನ ಕಾಲುಗಳನ್ನು ಅಲ್ಲಾಡಿಸದಂತೆ ನಿಂತಿದೆ, ರಸ್ತೆತುಂಬ ನಿಂತ ಮಳೆನೀರನ್ನು ಬೆಳಗಾಗುವುದರೊಳಗೆ ಹಿಂಗಿಸಿದೆ, ಬೇರಿಳಿಯಲೂ ಅವಕಾಶವಿಲ್ಲದ ಮೇಫ್ಲವರಿನ ಮರಗಳಲ್ಲಿ ಕೆಂಪನೆ ಹೂವರಳಿಸಿದೆ, ಮನೆಮನೆಗಳಿಂದ ಕಸ ಸಂಗ್ರಹಿಸಿ ದೊಡ್ಡ ಲಾರಿಯಲ್ಲಿ ಹೇರಿ ನಗರದ ಆಚೆ ಹಾಕಿದೆ, ಹಸಿದು ಬಂದವರಿಗೆ ನಡುರಾತ್ರಿಯಲ್ಲೂ ರಸ್ತೆಬದಿಯ ತಳ್ಳುಗಾಡಿಯಲ್ಲಿ ತಟ್ಟೆಇಡ್ಲಿ ತಿನ್ನಿಸಿದೆ. ಮತ್ತು, ತನ್ನ ಕಾಂತತ್ವಶಕ್ತಿಯನ್ನು ಇನ್ನೂ ಕಳೆದುಕೊಳ್ಳದ ಈ ನಗರ, ಆಕಾಂಕ್ಷಿಗಳನ್ನೆಲ್ಲ ತನ್ನೆಡೆಗೆ ಸೆಳೆಯುತ್ತಲೇ ಇದೆ. 
 
[ಕನ್ನಡ ಪ್ರಭ ದೀಪಾವಳಿ ವಿಶೇಷಾಂಕ-2023ರ 'ನನ್ನ ಬೆಂಗಳೂರು' ಸರಣಿಗಾಗಿ ಬರೆದದ್ದು]